ಶನಿವಾರ, ಮೇ 26, 2012

ರಂಗೋಲಿ - 1


ಈ ಲೇಖನಗಳು ಖಗೋಳ.blogspot .com ನ  ಸೊತ್ತು . ಇವನ್ನು ಅನುಮತಿಯಿಲ್ಲದೆ ಬಳಸುವುದು ಕಾನೂನು ಬಾಹಿರ . (ಕ)

ಈ ಲೇಖನ ಮಾಲೆ ಸಾಲಿಗ್ರಾಮದ ಹವ್ಯಾಸಿ ಖಗೋಳಿ   ಪ.ವೆ.ಉಪಾಧ್ಯಾಯರವರ ಪರಿಶ್ರಮದ  ಫಲ . ಇದನ್ನು ಅಂತರ್ಜಾಲ ರೂಪ ಕ್ಕೆ ತರುವ ನನ್ನ ಬಹುವರ್ಷಗಳ  ಕನಸಿಗೆ ಸಹಾಯ ಮಾಡಿದವರು ಉಡುಪಿ,ಕಲ್ಯಾಣಪುರ ಮಿಲಾಗ್ರೆಸ್ ಕಾಲೇಜು, ಕಾಲೇಜಿನ  ಭೌತಶಾಸ್ತ್ರ ವಿಭಾಗ  ಮತ್ತು ಅಲ್ಲಿನ ವಿದ್ಯಾರ್ಥಿ  ಮಿತ್ರ ಸುಜಿತ್.


ಈ ಲೇಖನಗಳನ್ನು   ಪ.ವೆ.ಉಪಾಧ್ಯಾಯರವರ  ಅನುಮತಿ ಪಡೆದು ಪ್ರಕಟಿಸಲಾಗಿದೆ.

ಧನ್ಯವಾದಗಳು .
ಹರಿ ಪ್ರಸಾದ.(ಖಗೋಳಿ )

ರಂಗೋಲಿ 

ವಿರಳ ಖಗೋಲ ಘಟನೆಯೊಂದರಿಂದ ಆಕರ್ಷಿತನಾಗಿ ಕಳೆದ ಹಲವಾರು ವರ್ಷಗಳಿಂದ ಅನಗತ್ಯವಾಗಿ ಖಗೋಲ ಶಾಸ್ತ್ರದಲ್ಲಿ ಮುಳುಗಿರುವ ನಾನು ಖಗೋಲದ ಕುರಿತು ಏನೇನು ತಿಳಿದುಕೊಂಡೆನೋ ಅದನ್ನಿಲ್ಲಿ ನನ್ನದೇ ಚಿತ್ರಗಳೊಂದಿಗೆ ಬರೆದಿರುವೆನು.
ನೀವೇನು  ತಿಳಿದುಕೊಂಡಿದ್ದಿರೋ ಅದನ್ನಿದರೋಟ್ಟಿಗೆ ಹೋಲಿಸಬಹುದು. ಇಲ್ಲಿ ಬರೆದಿರುವುದೆಲ್ಲ ಸತ್ಯವೆಂದಾಗಲೀ ಸುಳ್ಳೆಂದಾಗಲೀ ನಾನು ಹೇಳುವುದಿಲ್ಲ. ನನ್ನ ತಿಳಿವಿಗೆ ತೀವ್ರ ವಿರುದ್ಧವಾದ ಸತ್ಯವಿರುವವುಗಳ ಕುರಿತು ಅಲ್ಲಲ್ಲೇ ತಿಳಿಸಿರುವೇನು


ಖಗೋಳ : CELESTIAL SPHERE : ಚಂದ್ರನಿಲ್ಲದ ರಾತ್ರಿಯಲ್ಲಿ ಆಕಾಶದೆಡೆಗೆ  ನೋಡುವಾಗ ಅರ್ಧಗೋಲಾಕಾರದ ಬ್ರಹತ್ ಗುಮ್ಮಟವೊಂದನ್ನು ಭೂಮಿಯ ಮೇಲೆ ದಿಗಂತದಾಚೆಯವರೆಗೂ ಮುಚ್ಚಿದಂತಿದ್ದು ಆ ಗುಮ್ಮಟದ ಮೈ ತುಂಬಾ ಅಲ್ಲಲ್ಲಿ ತೂತಾಗಿದ್ದು ಗುಮ್ಮಟದ ಆಚೆ ಇರಬಹುದಾದ ಬೆಳಕು ಸೋರುವಂತೆ ಕಾಣುವ ಬೆಳಕಿನ ಚುಕ್ಕಿಗಳನ್ನು ಕಾಣುತ್ತೇವೆ ಸಹಜವಾಗಿಯೇ ಅವುಗಳನ್ನು ತಾರೆಗಳು ಎಂದು ತಿಳಿಯುತ್ತೇವೆ. ವಾಸ್ತವವಾಗಿ ಈ ತಾರೆಗಳು ಆಕಾಶದ ಹರಿವಿನಲ್ಲಿ ಬೇರೆ ಬೇರೆ ಆಳ ದೂರದಲ್ಲಿ ಚದುರಿಕೊಂಡಿದ್ದರೂ ಅವುಗಳೆಲ್ಲ ಒಂದೇ ದೂರದಲ್ಲಿ ಗುಮ್ಮಟವೊಂದಕ್ಕೆ ಅಂಟಿಕೊಂಡಿರುವಂತೆ ಕಾಣುವ ನೋಟವೇ ಖಗೋಲ, CELESTIAL SPHERE.

ದಿಗಂತ:HORIZON:  ವೀಕ್ಷಕನ ಸುತ್ತಲಿನ ನೆಲ ಮತ್ತು ಖಗೋಲ ಗುಮ್ಮಟದ ಅಂಚು ಸೇರುವಲ್ಲಿ ಗರಿಷ್ಟಗಾತ್ರದ ಮಹಾವ್ರತ್ತವೊಂದನ್ನು ಕಲ್ಪಿಸಿಕೊಂಡರೆ 
ಅದುವೇ ದಿಗಂತ, ಹಾರಿಜ ಕ್ಷಿತಿಜ, HORIZON. ದಿಗಂತವು ಇಡೀ ಖಗೋಲದ ಸುಮಾರು ಅರ್ಧಾಂಶ ಭಾಗವನ್ನು ಸದಾ ಅಗೋಚರವನ್ನಾಗಿರಿಸುತ್ತದೆ. ವಿಕ್ಷಕನೇ ಈ ದಿಗಂತ ಮಹಾವ್ರತ್ತದ ಕೇಂದ್ರಬಿಂದು. ಈ ಮಹಾವ್ರತ್ತದತಲವು [PLANE OF HORIZON]
ಗೋಲಾಕಾರದ ಭೂಮಿಯ ಮೈಗೆ ಸ್ಪರ್ಶರೇಖೆಯನ್ನುಂಟುಮಾಡಿದೆ [TANGENTIAL].
ಮತ್ತು ಲಂಬಸೂತ್ರಕ್ಕೆ [PLUMB] 90º  ಕೋನವನ್ನುಂಟುಮಾಡಿದೆ. ದಿಗಂತವು ವೀಕ್ಷಕನ ಅಕ್ಷಾಂಶ ರೇಕಾಂಶ ಮತ್ತು ಎತ್ತರ  [ALTITUDE] ವನ್ನನುಸರಿಸಿ ದಿಗಂತದಿಂದ ಮೇಲೆದ್ದಿರುತ್ತದೆ [ಕೆಳಗೂ].
ಈ ಧ್ರುವತಾರೆಯ ಪಕ್ಕದಲ್ಲಿರುವ ಖಗೋಲ ಧ್ರುವ [CELESTIAL POLE] ದಿಂದ ಹತ್ತಿರದ ದಿಗಂತದಲ್ಲಿ 90º ಕೋನವುಂಟಾಗುವಂತೆ ಕಾಲ್ಪನಿಕ ಗೆರೆಯೊಂದನ್ನೆಳೆಯಬೇಕು. ಈ ಗೆರೆ ದಿಗಂತದಲ್ಲಿ ಸ್ಪರ್ಶಿಸುವ ಬಿಂದುವೇ ಉತ್ತರಬಿಂದು. ಉತ್ತರಬಿಂದುವಿಗೆ ಮುಖ ಮಾಡಿ ನಿಂತಿರುವ ವೀಕ್ಷಕ 90º ಕೋನ ಬಲಕ್ಕೆ ತಿರುಗಿದರೆ ಪಶ್ಚಿಮ. ಉತ್ತರ-ದಕ್ಷಿಣ-ಪೂರ್ವ-ಪಶ್ಚಿಮ ಈ ನಾಲ್ಕು ಪ್ರಧಾನ ಬಿಂದುಗಳನ್ನು CARDINAL POINTS ಎನ್ನುವರು.

.
ಶಿರೋಬಿಂದು: ZENITH: ವೀಕ್ಷಕನ ಪೂರ್ವ ಪಶ್ಚಿಮ ಮತ್ತು ಉತ್ತರ ದಕ್ಷಿಣ ಬಿಂದುಗಳಿಂದ ದಿಗಂತದಲ್ಲಿ 90º ಕೋನವುಂಟಾಗುವಂತೆ ಒಂದೊಂದು  ಗೆರೆಗಳನ್ನು ದಿಗಂತದಿಂದ ಖಗೋಲಕ್ಕೆ ಮೇಲೆತ್ತಬೇಕು.
ಈ ನಾಲ್ಕು ಗೆರೆಗಳು ಸಂಗಮಿಸುವ ಕೇಂದ್ರವು ಈತನ ಶಿರೋಬಿಂದು, ಖಮಧ್ಯ, ZENITH.
ಇದು ಪ್ರತಿಯೊಬ್ಬ ವೀಕ್ಷಕನ ನೆತ್ತಿಯ ನೇರ ಮೇಲಕ್ಕಿರುವುದು.
ಶಿರೋಬಿಂದುವಿನಿಂದ ದಿಗಂತ ಮಹಾವ್ರತ್ತದ ಕೇಂದ್ರಬಿಂದುವಿನ [ವೀಕ್ಷಕನ] ಮುಲಕ ಭೂಮೈಯನ್ನು ತೂರಿಕೊಂಡು ಕೆಳಗಿನ ಅಗೋಚರ ಖಗೋಲವನ್ನು ಸೇರುವಂತೆ ಗೆರೆಯೊಂದನ್ನು ಕಲ್ಪಿಸಿಕೊಂಡರೆ ಈ ಗೆರೆ ಕೆಳಗಿನ ಅಗೋಚರ ಖಗೋಲದಲ್ಲಿ ಐಕ್ಯವಾಗುವ ಬಿಂದುವು ಅಧೋಬಿಂದು, NADIR.
ಉತ್ತರ ಬಿಂದುವಿನಿಂದ ಶಿರೊಬಿಂದುವಿನ ಮುಲಕ ದಕ್ಷಿಣ ಬಿಂದುವನ್ನು ತಲುಪುವ ಗೆರೆಯೊಂದನ್ನು ಕಲ್ಪಿಸಿಕೊಂಡರೆ ಅದುವೇ ವೀಕ್ಷಕನ ಮಧ್ಯಾಹ್ನ ರೇಖೆ OBSERVER'S MERIDIAN LINE.


ವಿಷುವದ್ ವೃತ್ತ : CELESTIAL EQUATOR: ಭೂಮಿ  ಗೋಲಾಕಾರದಲ್ಲಿದ್ದು  ಸದಾ ಉರುಳುತ್ತಿರುತ್ತದೆ. ಇದುವೇ  ಭೂಮಿಯ ದೈನಂದಿನ ಚಲನೆ [ಆವರ್ತನೆ. ಆಕ್ಷಿಕ ತಿರುವು. AXIAL ROTATION]. ಈ ಉರುಳುವಿಕೆಗೊಂದು [ಕಾಲ್ಪನಿಕ ] ಅಕ್ಷವಿರುವುದು [AXIS]. ಅಕ್ಷದ ಎರಡು ತುದಿಗಳೇ  ಉತ್ತರಧ್ರುವ ಮತ್ತು ದಕ್ಷಿಣಧ್ರುವಗಳು. ಈ ಎರಡು ತುದಿಗಳನ್ನು ಖಗೋಳಕ್ಕೆ ವಿಸ್ತರಿಸಿದರೆ ಇವು ಖಗೋಳದಲ್ಲಿ ಐಕ್ಯವಾಗುವ  ಬಿಂದುಗಳೇ ಖಗೋಳ ಧ್ರುವಗಳು,CELESTIAL POLES.ಭೂಮಿಯ ಸಮಭಾಜಕವೃತ್ತದ ತಲವನ್ನು [PLANE OF EQUATOR] ಖಗೋಳಕ್ಕೆ ವಿಸ್ತರಿಸಿದರೆ ಅದುವೇ ಖಗೋಳ ಸಮದ್ವಿಭಾಜಕವೃತ್ತ, ವಿಷುವದ್ ವೃತ್ತ   CELESTIAL EQUATOR. [ಚಿತ್ರ 7F]. ಇದು ವೀಕ್ಷಕನ ಅಕ್ಷಾಂಶ [LATITUDE] ವನ್ನನುಸರಿಸಿ ದಿಗಂತದೆಡೆಗೆ ವಾಲಿಕೊಂಡಿರುತ್ತದೆ. ಅಂದರೆ ಭೂಮಿಯ ಉತ್ತರಾರ್ಧಗೋಳದ ವೀಕ್ಷಕರಿಗೆ ದಕ್ಷಿಣ ದಿಗಂತದೆಡೆಗೂ ಮತ್ತು ದಕ್ಷಿಣಾರ್ಧಗೋಳದ ವೀಕ್ಷಕರಿಗೆ ಉತ್ತರ ದಿಗಂತದೆಡೆಗೂ ವಾಲಿರುತ್ತದೆ.  

 

ವಿಷುವದ್ ಬಿಂದುಗಳು:  EQUINOCTIAL POINTS: ವಿಷುವದ್ ವ್ರತ್ತದ  ಮೇಲೆ ವ್ಯಾಸೀಯ ವಿರುದ್ಧ ದಿಕ್ಕುಗಳಲ್ಲಿರುವ ಎರಡು ಬಿಂದುಗಳು. (ಚಿತ್ರ ಸಹಿತ  ಲೇಖನ ಮುಂದಿನ ಚಿತ್ರ 7G ಪುಟ 25 26 ರಲ್ಲಿ ಬರಲಿದೆ ).


ಕ್ರಾಂತಿವ್ರತ್ತ: ECLIPTIC :    ಭೂಮಿ ದೈನಂದಿನ ಚಲನೆಯೊಂದಿಗೆ, ಅಂದರೆ ಆವರ್ತನೆಯೊಂದಿಗೆ ಸೂರ್ಯನನ್ನು ಕೇಂದ್ರವಾಗಿಸಿಕೊಂಡು ಸೂರ್ಯನ ಸುತ್ತಾ ಓಡುತ್ತಿರುತ್ತದೆ. ಇದುವೇ ಭೂಮಿಯ ಕಕ್ಷಾ ಚಲನೆ [ORBITAL MOTION OF EARTH] ಈ ಕಕ್ಷಾ ಚಲನೆಯ ದಾರಿಯೇ ಕಾಂತಿವ್ರತ್ತ [ECLIPTIC]. ಕಾಂತಿವ್ರತ್ತವು ವಿಷುವದ್ ವ್ರತ್ತಕ್ಕೆ 23.449º ಕೋನ ಉತ್ತರ ದಕ್ಷಿಣವಾಗಿ ವಾಲಿಕೊಂಡಿರುತ್ತದೆ. ಕ್ರಾಂತಿವ್ರತ್ತದಿಂದ ಉತ್ತರಕ್ಕೆ ಮತ್ತು ದಕ್ಷಿಣಕ್ಕೆ 9 + 9 = 18º ಕೋನ ಅಗಲದ ದಾರಿಯಲ್ಲಿ ಸೂರ್ಯಪರಿವಾರದ ಬಹುಪಾಲು ಕಾಯಗಳು ಭೂಮಿಯೋಟ್ಟಿಗೆ ಬೇರೆ ಬೇರೆ ವೇಗದಲ್ಲಿ ಬೇರೆ ಬೇರೆ ದೂರಗಳಲ್ಲಿ ಸೂರ್ಯನಿಗೆ ಸುತ್ತುತ್ತಿರುತ್ತವೆ. ಈ 18º  ಕೋನ ಅಗಲದ ದಾರಿಯೇ ರಾಶಿಚಕ್ರ, ZODIAC BELT, ZODIAC BAND.ರಾಶಿಚಕ್ರದ ಮೇಲೆ ಉದ್ದಕ್ಕೆ ಹರಡಿಕೊಂಡಿರುವ ತಾರಾ ಪುಂಜಗಳೆ ರಾಶಿಪುಂಜಗಳು, ZODIAC CONSTELLATION.


ಆಯನ SOLSTICE: ಭೂಮಿಯ ಸಮಭಾಜಕವ್ರತ್ತದ ತಲ ಮತ್ತು ಕ್ರಾಂತಿವ್ರತ್ತದ ತಲ ಇವೆರಡೂ ಒಂದರೊಳಗೊಂದು ಐಕ್ಯವಾಗಿಲ್ಲದ [23.45º ವಾಲಿಕೊಂಡಿದೆ] ಕಾರಣದಿಂದಾಗಿ ದಿಗಂತದಲ್ಲಿ ಸೂರ್ಯ ಉದಯಾಸ್ತಗಳ ಸ್ಥಾನ ಸ್ಥಿರವಾಗಿದೆ ಉತ್ತರ ದಕ್ಷಿಣವಾಗಿ ಬದಲಾಗುತ್ತಿರುತ್ತದೆ.
ಡಿಸೆಂಬರ್ 22 ರಂದು ಭೂಮಧ್ಯೆರೇಖೆಯಿಂದ ಸುಮಾರು 23.5º ದಕ್ಷಿಣದಲ್ಲಿ ಮತ್ತು ಜೂನ್ 21 ರಂದು ಭೂಮಧ್ಯರೇಖೆಯಿಂದ ಸುಮಾರು 23.5º ಡಿಗ್ರಿ ಉತ್ತರದಲ್ಲೂ ಸೂರ್ಯ ಉದಯಾಸ್ತಗಳಾಗುತ್ತವೆ  [ಚಿತ್ರ ಸಹಿತ  ಲೇಖನ ಮುಂದಿನ ಪುಟ 17 ಚಿತ್ರ 7E A ರಲ್ಲಿ ಬರಲಿದೆ ]. ಕ್ರಾಂತಿವ್ರತ್ತದಲ್ಲಿ ಡಿಸೆಂಬರ್ 22 ರ ಸೂರ್ಯನ ಸ್ಥಾನ ಬಿಂದುವಿಗೆ ದಕ್ಷಿಣಾಯಾನಬಿಂದು [ದಕ್ಷಿಣಾಯನಾಂತ್ಯಬಿಂದು]
ಮತ್ತು ಜೂನ್ 21 ರ ಸೂರ್ಯನ ಸ್ಥಾನ ಬಿಂದುವಿಗೆ ಉತ್ತರಾಯಣಬಿಂದು [ಉತ್ತರಾಯನಾಂತ್ಯಬಿಂದು] ಎಂಬುದಾಗಿ ಕರೆಯಲ್ಪಡುತ್ತದೆ. ರಾಶಿ ಪುಂಜ ಮಿಥುನದಲ್ಲಿ ಉತ್ತರಾಯನಾಂತ್ಯ ಬಿಂದು ಮತ್ತು ರಾಶಿ ಪುಂಜ ಧನುವಿನಲ್ಲಿ ದಕ್ಷಿಣಾಯನಾಂತ್ಯ ಬಿಂದುಗಳಿರುವುದನ್ನು SKY ATLAS ನಲ್ಲಿ  ಗುರುತಿಸಬಹುದು.







 
 
ಚಿತ್ರ 1: ಭೂಮಿಯಿಂದ ಹೊರಗೆ ಉತ್ತರ ದಿಕ್ಕಿನಲ್ಲಿ ಬಾಹ್ಯಾಕಾಶದಲ್ಲಿ ನಿಂತು ದಕ್ಷಿಣಕ್ಕೆ ಮುಖ ಮಾಡಿ ಸೂರ್ಯ ಎಡ ಬದಿಗೆ ಇರುವುದನ್ನು
ಕಲ್ಪಿಸಿಕೊಳ್ಳುವುದು. ಭೂಮಿಯ ದೈನಂದಿನ ಚಲನೆಯಾದ ಉದಯಾಸ್ತಗಳಿಗೆ ಕಾರಣವಾಗುವ ಆವರ್ತನೆಯನ್ನು [AXIAL ROTATION] ಆಧರಿಸಿ ದಿಕ್ಕುಗಳನ್ನು ಗುರುತಿಸುವುದು. ಭೂಮಿಯನ್ನೊಂದು ಗಡಿಯಾರದ ಮುಖ ಎಂಬುದಾಗಿ ಕಲ್ಪಿಸಿಕೊಂಡರೆ ಅದರಲ್ಲಿನ ಅಂಕೆಗಳ ಹಂಚಿಕೆಯ ಕ್ರಮದ ದಿಕ್ಕು ಪೂರ್ವದಿಂದ ಪಶ್ಚಿಮಕ್ಕೆ. ಮತ್ತು ಹಾಗೆ ಹಂಚಿಕೆಯ ಕ್ರಮದ ವಿರುದ್ಧ  ದಿಕ್ಕು ಪಶ್ಚಿಮದಿಂದ ಪೂರ್ವಕ್ಕೆ ಎಂಬುಉದಾಗಿ ತಿಳಿಯಬೇಕು. ಹಾಗೆ ಭೂಮಿಯ ಆವರ್ತನೆಯು ಸದಾ ಪೂರ್ವದಿಕ್ಕಿಗೇ [ANTICLOCKWISE] ಇರುದನ್ನು ಈ ಚಿತ್ರವೂ ತೋರಿಸುತ್ತದೆ. E= ಪೂರ್ವ, W=ಪಶ್ಚಿಮ, EH=ಪೂರ್ವ ದಿಗಂತ, WH=ಪಶ್ಚಿಮ ದಿಗಂತ, MN=ಮಧ್ಯರಾತ್ರಿ, MD=ಮಧ್ಯಾಹ್ನ, ET=ಮುಸ್ಸಂಜೆ, MT=ಮುಂಜಾನೆ, NP=ಉತ್ತರ ಧ್ರುವ.

ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ ...

ಕಾಮೆಂಟ್‌ಗಳಿಲ್ಲ: